ತರಕಾರಿ ಅಲ್ಲ ಬೀಜ ಬೆಳೆದು ಲಾಭ ಗಳಿಸಿದ ರೈತರು! ಇದು ಚಿತ್ರದುರ್ಗದ ಸಹೋದರರ ಕಮಾಲ್!
ತರಕಾರಿ ಬೆಳೆದು ಅದನ್ನು ಮಾರಾಟ ಮಾಡಿ ಲಾಭ ಗಳಿಸುವುದು ಸಾಮಾನ್ಯ ರೈತರು. ಆದರೆ ಪರಶುರಾಂಪುರ (ಚಿತ್ರದುರ್ಗ) ಸಮೀಪದ
ನಾಗಗೊಂಡನಹಳ್ಳಿಯ ರೈತ ಸಹೋದರರಾದ ಜಿ.ಸಿ.ನಾಗರಾಜ ಮತ್ತು ಜಿ.ಸಿ ಬಸವರಾಜ್ ಅವರು ಹೀರೇಕಾಯಿ, ಬೆಂಡೆಕಾಯಿ, ಸೋರೆಕಾಯಿ, ಕುಂಬಳಕಾಯಿ, ದಂಟಿನಸೊಪ್ಪು ಸೇರಿದಂತೆ ವಿವಿಧ ತರಕಾರಿ ಬೆಳೆಗಳನ್ನು ಬೆಳೆದು ಅದನ್ನು ಮಾರಾಟ ಮಾಡುವುದಕ್ಕಿಂತ ಅವುಗಳ ಬೀಜ ಮಾರಾಟದಿಂದ ಹೆಚ್ಚಿನ ಲಾಭ ಗಳಿಸುತ್ತಿದ್ದಾರೆ.
ಐ.ಐ.ಎಚ್.ಆರ್ ಸಂಸ್ಥೆಯೊಂದಿಗೆ ಒಪ್ಪಂದ!
ಈ ಇಬ್ಬರು ಸಹೋದರರು ಕೇವಲ ಬೆಳೆ ಬೆಳೆದು ವೈಜ್ಞಾನಿಕ ಮಾಹಿತಿ ಇಲ್ಲದೇ ಮಾರುಕಟ್ಟೆಗೆ ಹೋಗಿ ಮಾರಾಟ ಮಾಡಿಲ್ಲ. ಬದಲಾಗಿ ಕಳೆದ 4 ವರ್ಷಗಳಿಂದ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಹಾರ್ಟಿಕಲ್ಟರ್ ರಿಸರ್ಚ್ (ಐ.ಐ.ಎಚ್.ಆರ್.) ಸಂಸ್ಥೆ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದು, ವಿವಿಧ ತರಕಾರಿ ಬೆಳೆ ಬೆಳೆದು, ಅದರಿಂದ ಬೀಜ ತೆಗೆದು ಅದೇ ಸಂಸ್ಥೆಗೆ ಮಾರಾಟ ಮಾಡುತ್ತಿದ್ದಾರೆ. ಇದರಿಂದಾಗಿ ಇವರಿಗೆ ಯಾವಾಗಲೂ ಖರೀದಿದಾರರ ಖಾತ್ರಿಯಿದ್ದು, ಬೀಜ ಮಾರಾಟದಿಂದ ಉತ್ತಮ ಆದಾಯ ಪಡೆಯುತ್ತಿದ್ದಾರೆ.
ಹೀರೇಕಾಯಿ ಬೀಜದಿಂದ 10 ಲಕ್ಷ!
ಈ ರೈತ ಸಹೋದರರು ಒಟ್ಟು 12 ಎಕರೆ ಜಮೀನು ಹೊಂದಿದ್ದು, ಅದರಲ್ಲಿ 6 ಎಕರೆಯಲ್ಲಿ ಅಡಿಕೆ ಬೆಳೆದಿದ್ದಾರೆ. ಇನ್ನು 5 ಎಕರೆಯಲ್ಲಿ ತಿಂಗಳ ಹಿಂದೆ ಹೀರೇಕಾಯಿ ಬೆಳೆ ನಾಟಿ ಮಾಡಿದ್ದಾರೆ. ಹೀರೇಕಾಯಿ ಬಳ್ಳಿಯು ಉತ್ತಮವಾಗಿ ಬಂದಿದ್ದು, ಇನ್ನು 4 ತಿಂಗಳು ಕಳೆದರೆ ಕಟಾವಿಗೆ ಬರುತ್ತದೆ. 10 ಕ್ವಿಂಟಲ್‌ಗೂ ಹೆಚ್ಚು ಇಳುವರಿ ಬರುವ ನಿರೀಕ್ಷೆ ಇದ್ದು, 1 ಕ್ವಿಂಟಲ್ ಹೀರೇಕಾಯಿ ಬೀಜಕ್ಕೆ ₹ 1 ಲಕ್ಷ ಬೆಲೆಯಿದ್ದು, ₹ 10 ಲಕ್ಷ ಆದಾಯ ಬರುವ ನಿರೀಕ್ಷೆ ಇದೆ ಎನ್ನುತ್ತಾರೆ ರೈತ ಬಸವರಾಜ್.
ಒಪ್ಪಂದ ಮಾಡಿಕೊಂಡಿರುವ ಸಂಸ್ಥೆಯಿಂದಲೇ ಉತ್ತಮ ಬೀಜ ನೀಡುತ್ತಾರೆ. ಅದಕ್ಕೆ ಬೇಕಾದ ಗೊಬ್ಬರ, ಔಷಧ ಯಾವ ರೀತಿ, ಯಾವ ಪ್ರಮಾಣದಲ್ಲಿ ಹಾಕಬೇಕು ಎಂದು ಅವರೇ ಮಾರ್ಗದರ್ಶನ ನೀಡುತ್ತಾರೆ. ಅದರಂತೆ ನಾವು ನೋಡಿಕೊಳ್ಳಬೇಕು. ಕಾಲಕಾಲಕ್ಕೆ ನೀರು, ಔಷಧ, ಗೊಬ್ಬರವನ್ನು ನೀಡಿದರೆ ಉತ್ತಮ ಇಳುವರಿ ಪಡೆಯಬಹುದು. ಅದನ್ನು ಮತ್ತೇ ಅದೇ ಸಂಸ್ಥೆಗೆ ಮಾರಿ ಆದಾಯ ಪಡೆಯಬಹುದು ಎಂದು ಅವರು ಮಾಹಿತಿ ನೀಡಿದ್ದಾರೆ.
ದಂಟಿನಸೊಪ್ಪಿನಿಂದ 7.60 ಲಕ್ಷ ಆದಾಯ!
ಈ ರೈತರು 2022ರಲ್ಲಿ 2 ಎಕರೆಯಲ್ಲಿ ಉತ್ತಮ ರೀತಿಯಲ್ಲಿ ದಂಟಿನಸೊಪ್ಪನ್ನು ಬೆಳೆದಿದ್ದರು. ಈ ಸಾಧನೆಯನ್ನು ಗುರುತಿಸಿ ಐ.ಐ.ಎಚ್.ಆರ್ ಸಂಸ್ಥೆ ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಹಾಗೂ ಸಂಸ್ಥೆಯು 2 ಎಕರೆಯಲ್ಲಿ 12 ಕ್ವಿಂಟಲ್ ದಂಟಿನ ಸೊಪ್ಪಿನ ಬೀಜ ಬೆಳೆಯುವ ಗುರಿ ನೀಡಿತ್ತು. ಬಸವರಾಜ್ ಅವರು 19 ಕ್ವಿಂಟಲ್ ಗೂ ಹೆಚ್ಚಿನ ಬೀಜವನ್ನು ಬೆಳೆದಿದ್ದರು. 1 ಕೆ.ಜಿ ದಂಟಿನಸೊಪ್ಪಿನ ಬೀಜದ ಬೆಲೆ ₹ 400 ಇದೆ. 1 ಕ್ವಿಂಟಾಲ್ ಗೆ ₹ 40,000 ರಂತೆ ₹ 7.60 ಆದಾಯ ಗಳಿಸಿದ್ದರು. ಇದರಿಂದ ಸಂಸ್ಥೆ ರೈತರ ಮೇಲೆ ನಂಬಿಕೆಯಿಟ್ಟು ಒಪ್ಪಂದ ಮಾಡಿಕೊಂಡಿತು.
ಈಗ ಅದರಂತೆ ಪ್ರತಿ ವಷ೯ ಬೇರೆ ಬೇರೆ ತರಕಾರಿ ಬೆಳೆ ಬೆಳೆದು ಬೀಜ ತಯಾರಿಸಿ ಲಾಭ ಗಳಿಸುತ್ತಿದ್ದಾರೆ. ಹೀಗೆ ಸಂಸ್ಥೆಯ ಜೊತೆಗೆ ಸೇರಿಕೊಂಡು ಉತ್ತಮ ಕೆಲಸ ಮಾಡುತ್ತಾ, ವೈಜ್ಞಾನಿಕ ಕೃಷಿಯಿಂದ ತಾವು ಕೂಡ ಸಾಕಷ್ಟು ಲಾಭ ಪಡೆಯುತ್ತಿದ್ದಾರೆ.
ನೀವು ಕೂಡ ಹೀಗೆ ವೈಜ್ಞಾನಿಕ ಕೃಷಿಯ ಕಡೆ ಗಮನಹರಿಸಿ ಸಕಾ೯ರಿ ಇಲಾಖೆಗಳಿಂದ ಹೆಚ್ಚಿನ ಮಾಹಿತಿ ಪಡೆದು ನಿಮ್ಮ ಕೃಷಿಯಲ್ಲಿ ಹೆಚ್ಚಿನ ಆದಾಯ ಗಳಿಸಬಹುದು.
ಧನ್ಯವಾದಗಳು
****** ಅಂತ್ಯ ******
ರೈತರ ಸೇವೆಯಲ್ಲಿ ನಿಮ್ಮ vkkrushi.com 💚
ಪರಿಸರ ಪರಿಸರದೊಂದಿಗೆ ವಿಕೆ
ಆರ್ಥಿಕತೆ