ಬಿಜೆಪಿ- ಜೆಡಿಎಸ್ ಮೈತ್ರಿ! ನಾಲ್ಕು ಕ್ಷೇತ್ರದಿಂದ ಮಾತ್ರ ಜೆಡಿಎಸ್ ಸ್ಪರ್ಧೆ! ಯಾವ ಕ್ಷೇತ್ರಗಳವು?
ರಾಜ್ಯದಲ್ಲಿ ವಿಧಾನ ಸಭಾ ಚುನಾವಣೆಯಲ್ಲಿ ಮುಗ್ಗರಿಸಿರುವ ಬಿಜೆಪಿಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಜಯಗಳಿಸಲೇ ಬೇಕಾಗಿದ್ದು, ಹಿಂದಿನ ಅವಧಿಯಲ್ಲಿ ಗಳಿಸಿರುವ 26 ಕ್ಷೇತ್ರಗಳನ್ನು ಉಳಿಸಿಕೊಳ್ಳಲೇಬೇಕಾಗಿದೆ. ಆದ್ದರಿಂದಲೇ ಈಗಾಗಲೇ ಬಿಜೆಪಿ ಹಾಗೂ ಜೆಡಿಎಸ್ ರಾಜಕೀಯ ರಣತಂತ್ರವನ್ನು ರೂಪಿಸಿದ್ದು, ಮೈತ್ರಿ ಮಾಡಿಕೊಳ್ಳುವ ಮೂಲಕ ತಂತ್ರಗಾರಿಕೆಯನ್ನು ಶುರು ಮಾಡಿವೆ.
ಹೌದು, 2024 ರ ಮೇ ನಲ್ಲಿ ನಡೆಯಬಹುದಾದ ಚುನಾವಣೆಯಲ್ಲಿ ರಾಜ್ಯದ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಒಟ್ಟಾಗಿ ಸೇರಿ ಚುನಾವಣೆ ಎದುರಿಸುವ ಯೋಜನೆ ಹಾಕಿಕೊಂಡಿದ್ದು, ಈ ಬಗ್ಗೆ ಕಳೆದ ಸೆಪ್ಟೆಂಬರ್‌ನಲ್ಲಿಯೇ ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಗೆ ಮೈತ್ರಿಯನ್ನು ಘೋಷಿಸಿವೆ. ಪ್ರಸ್ತುತ ಚುನಾವಣೆ ಹತ್ತಿರವಾಗುತ್ತಿದ್ದು, ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿ ಪ್ರಚಾರ ಪ್ರಾರಂಭಿಸುವ ಬಗ್ಗೆ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಆದರೆ ಅದಕ್ಕೂ ಮುನ್ನ ಮೈತ್ರಿ ಮಾಡಿಕೊಂಡಿರುವ ಕಾರಣದಿಂದ ಭಾರತೀಯ ಜನತಾ ಪಕ್ಷ ಮತ್ತು ಜನತಾ ದಳ (ಜಾತ್ಯತೀತ) ಪಕ್ಷಗಳು ತಮ್ಮಲ್ಲಿ ಸೀಟು ಹಂಚಿಕೆಯನ್ನು ಅಂತಿಮಗೊಳಿಸುವ ಹಂತದಲ್ಲಿದೆ ಎಂದು ವರದಿಯಾಗಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ 28 ಸ್ಥಾನಗಳ ಪೈಕಿ 26 ರಲ್ಲಿ ಗೆಲುವು ಸಾಧಿಸಿತ್ತು. ಆದರೆ ಈ ಬಾರಿ ಮೈತ್ರಿಯಿಂದಾಗಿ ಜೆಡಿಎಸ್ ಗೆ ಸ್ಥಾನ ಬಿಟ್ಟುಕೊಡಬೇಕಾಗುತ್ತದೆ. ಆದ್ದರಿಂದ 28 ಕ್ಷೇತ್ರಗಳ ಪೈಕಿ ಬಿಜೆಪಿ 24 ರಲ್ಲಿ ಸ್ಪರ್ಧಿಸಲಿದ್ದು, ಜೆಡಿಎಸ್ 4 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಉನ್ನತ ಮಟ್ಟದಲ್ಲಿ ಮೈತ್ರಿ ಮಾಡಿಕೊಂಡಿರುವ ಪಕ್ಷಗಳು ತಳಮಟ್ಟದಲ್ಲೂ ಕೂಡ ಮೈತ್ರಿ ಯಶಸ್ವಿಯಾಗಿ ಮುಂದುವರೆದು ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರನ್ನ ನಡುವೆ ಹೊಂದಾಣಿಕೆಯನ್ನ ರೂಪಿಸುವ ನಿಟ್ಟಿನಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನ ಹಿರಿಯ ನಾಯಕರು ಸಭೆಯನ್ನ ನಡೆಸುತ್ತಿದ್ದಾರೆ. ಏಕೆಂದರೆ ಕಾಯ೯ಕತ೯ರೇ ಪಕ್ಷಗಳ ಗೆಲುವಿಗೆ ಮೆಟ್ಟಿಲಾಗುವುದು ಆದ್ದರಿಂದಲೇ ಅವರ ಮಧ್ಯೆ ಹೊಂದಾಣಿಕೆ ತುಂಬಾ ಮುಖ್ಯವಾಗುತ್ತದೆ.
ಇನ್ನು ಚುನಾವಣೆ ಔಪಚಾರಿಕವಾಗಿ ಘೋಷಣೆಯಾಗುವುದಕ್ಕೆ ಸಮಯವಿದ್ದು, ಘೋಷಣೆ ಆದ ನಂತರದಲ್ಲಿ ಕ್ಷೇತ್ರ ಹಂಚಿಕೆ ಕುರಿತು ಅಧಿಕೃತಗೊಳಿಸುವುದಾಗಿ ಬಿಜೆಪಿ ಹೈಕಮಾಂಡ್ ತಿಳಿಸಿದೆ ಎನ್ನಲಾಗಿದೆ.
ಯಾವ ಕ್ಷೇತ್ರಗಳಲ್ಲಿ ಜೆಡಿಎಸ್ ನಿಲ್ಲುವ ಸಾಧ್ಯತೆ?
ರಾಜ್ಯದ 28 ಕ್ಷೇತ್ರಗಳ ಪೈಕಿ ಮಂಡ್ಯ, ಹಾಸನ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಗಳಲ್ಲಿ ಜೆಡಿಎಸ್ ಒಲವಿದ್ದು, ಜೆಡಿಎಸ್‌ಗೆ ಈ ನಾಲ್ಕು ಕ್ಷೇತ್ರಗಳು ಹಂಚಿಕೆಯಾಗಬಹುದು ಎಂದು ಮೂಲಗಳು ತಿಳಿಸಿವೆ. ಆದರೆ ಈ ಬಗ್ಗೆ ಇನ್ನು ಯಾವುದೇ ಅಧಿಕೃತ ಮಾಹಿತಿ ಇಲ್ಲ.
ಸವೆ೯ ಆಧಾರದ ಮೇಲೆ ಕ್ಷೇತ್ರ ವಿಂಗಡಣೆ ಸಾದ್ಯತೆ!
ಈಗಾಗಲೇ ಜೆಡಿಎಸ್ ನಾಯಕರು ಕುಟುಂಬ ಸಮೇತರಾಗಿ ಬಿಜೆಪಿ ಹೈಕಮಾಂಡ್ ಜೊತೆ ಮಾತುಕತೆ ನಡೆಸಿದ್ದು, ಆರಂಭದಲ್ಲಿ ಮಂಡ್ಯ, ಹಾಸನ ಮತ್ತು ಚಿಕ್ಕಬಳ್ಳಾಪುರ ಹೊರತುಪಡಿಸಿ ತುಮಕೂರು ಮತ್ತು ಬೆಂಗಳೂರು ಗ್ರಾಮಾಂತರದಿಂದ ಸ್ಪರ್ಧಿಸುವುದಾಗಿ ಮಾತನಾಡಲಾಗಿದೆ ಎನ್ನಲಾಗಿತ್ತು. ಆದರೆ, ಕೆಲವು ಚುನಾವಣಾ ಪೂವ೯ ಸರ್ವೆಗಳನ್ನು ಆಧಾರಿಸಿ ಇದೀಗ ಜೆಡಿಎಸ್ ಗೆ ಒಕ್ಕಲಿಗರ ಕೋಟೆಯಲ್ಲಿ ಹೆಚ್ಚು ಪ್ರಾಬಲ್ಯವಿದೆ ಎಂಬುದು ತಿಳಿದು ಬಂದಿದ್ದು, ಮಂಡ್ಯ, ಹಾಸನ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಕ್ಷೇತ್ರವನ್ನ ಬಿಟ್ಟುಕೊಡಲು ನಿರ್ಧರಿಸಿದೆ ಎನ್ನಲಾಗಿದೆ.
ಒಕ್ಕಲಿಗರದೇ ಪ್ರಾಬಲ್ಯ!
ಮೇಲಿನ ನಾಲ್ಕು ಕ್ಷೇತ್ರಗಳಲ್ಲಿ ಕರ್ನಾಟಕದ ಜನಸಂಖ್ಯೆಯ ಸುಮಾರು 16% ರಷ್ಟಿರುವ ಒಕ್ಕಲಿಗ ಮತದ ಪ್ರಾಬಲ್ಯವನ್ನು ಪರಿಗಣಿಸಿದ ರಾಜ್ಯದ ರಾಜಕೀಯ ವಿಶ್ಲೇಷಕರು ಈ ಮೈತ್ರಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಮೂಲಗಳು ಹೇಳುವ ಪ್ರಕಾರ ಜೆಡಿಎಸ್ ಕೋಟಾದಲ್ಲಿ ಎಲ್ಲಾ ನಾಲ್ಕು ಸ್ಥಾನಗಳು ಒಕ್ಕಲಿಗ ಭದ್ರಕೋಟೆಗಳಾಗಿವೆ. ಸುಲಭವಾಗಿ ಗೆಲುವು ಸಾಧಿಸಬಹುದಾದ ಈ ನಾಲ್ಕು ಕ್ಷೇತ್ರಗಳೇ ಜೆಡಿಎಸ್ ಗೆ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ.
2019 ರ ಲೋಕಸಭೆ ಚುನಾವಣೆಯಲ್ಲಿ, ಕರ್ನಾಟಕದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಒಟ್ಟಿಗೆ ಸ್ಪರ್ಧಿಸಿದ್ದವು. ಆದರೆ ಹೀನಾಯಕರ ಸೋಲು ಅನುಭವಿಸಿದ್ದವು. ಆದರೆ ಈ ಬಾರಿ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿಯಾಗಿದೆ. ಇನ್ನು ಕ್ಷೇತ್ರಗಳಲ್ಲಿ ಯಾರ ಪರ ಒಲವು ಇದೆ ಎಂಬುದನ್ನು ನೋಡಲು ನಾಯಕರ ಓಡಾಟ ಜೋರಾಗಿದ್ದು, ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರಾದ ಹೆಚ್ ಡಿ ಕುಮಾರಸ್ವಾಮಿ ಅವರು, ಒಕ್ಕಲಿಗರ ಭದ್ರಕೋಟೆಗಳಾದ ಐದು ಲೋಕಸಭಾ ಕ್ಷೇತ್ರದಲ್ಲಿ ಸರ್ವೆ ನಡೆಸಿದ್ದು, ಬಿಜೆಪಿಗಿಂತ ಜೆಡಿಎಸ್ ಗೆ ಹೆಚ್ಚಿನ ಒಲವು ಕೇಳಿ ಬಂದಿದೆ ಎಂದಿದ್ದಾರೆ. ಆದ್ದರಿಂದ 28 ಕ್ಷೇತ್ರಗಳ ಪೈಕಿ ಈ ನಾಲ್ಕು ಕ್ಷೇತ್ರಗಳು ಜೆಡಿಎಸ್ ತೆಕ್ಕೆಗೆ ಬರುವುದು ನಿಶ್ಚಿತ ಎಂದು ಹೇಳಲಾಗುತ್ತಿದೆ.
ಇನ್ನು ಈ ಕ್ಷೇತ್ರಗಳಲ್ಲಿ ಒಕ್ಕಲಿಗರ ಪ್ರಾಬಲ್ಷ ಹೆಚ್ಚಾಗಿದ್ದು, ಒಕ್ಕಲಿಗರ ಮೇಲೆ ಜೆಡಿಎಸ್‌ಗೆ ಹಿಡಿತವಿದೆ ಎನ್ನಲಾಗುತ್ತಿದೆ. ಪಕ್ಷದ ಮುಖ್ಯಸ್ಥ ಎಚ್‌ಡಿ ಕುಮಾರಸ್ವಾಮಿ ಮತ್ತು ಅವರ ತಂದೆ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಆದರೆ ಅದೇ ರೀತಿಯಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್‌ನಲ್ಲಿ ಉಪಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ್ ಅವರು ಕೂಡ ಪ್ರಬಲ ಒಕ್ಕಲಿಗ ನಾಯಕರಾಗಿದ್ದಾರೆ.
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ, ಒಕ್ಕಲಿಗರು ತಮ್ಮ ಬೆಂಬಲವನ್ನು ಎರಡು ಪಕ್ಷಗಳ ಪೈಕಿ ವಿಭಜಿಸಿದ್ದು, ಇದು ಜೆಡಿಎಸ್ ಮೇಲೆ ಕೆಟ್ಟ ಪರಿಣಾಮ ಬೀರಿತು. ಈ ಕ್ಷೇತ್ರಗಳಲ್ಲಿನ ಸಂಸತ್ತಿನ ಚುನಾವಣೆಯು ಒಕ್ಕಲಿಗರು ಯಾವ ರೀತಿಯಲ್ಲಿ ಮತ ಚಲಾಯಿಸುತ್ತಾರೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಮೈತ್ರಿ ಮೂಲಕ ಹೊಸ ದಾಳ ಹಾಕುತ್ತಿರುವ ಜೆಡಿಎಸ್ ಗೆ ಮತದಾರ ಯಾವ ನಿಣ೯ಯ ನೀಡುತ್ತಾನೋ ಕಾದು ನೋಡಬೇಕಿದೆ.
ಧನ್ಯವಾದಗಳು
****** ಅಂತ್ಯ ******
ರೈತರ ಸೇವೆಯಲ್ಲಿ ನಿಮ್ಮ vkkrushi.com 💚
ಪರಿಸರ ಪರಿಸರದೊಂದಿಗೆ ವಿಕೆ
ಆರ್ಥಿಕತೆ